ಹುಬ್ಬಳ್ಳಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ 2022-25ರ ಸಾಲಿನ ಚುನಾವಣೆಯ ಮತದಾನ ನಾಳೆ (ಫೆ. 27) ರಂದು ರವಿವಾರ ಸಂಘದ ಪತ್ರಕರ್ತರ ಭವನದ ಕಟ್ಟಡದಲ್ಲಿ ಬೆಳಿಗ್ಗೆ 10 ರಿಂದ 3 ಗಂಟೆಯವರೆಗೆ ಜರುಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಸಕಲ ಸಿದ್ಧತೆ ಮಾಡಲಾಗಿದೆ.
ಮತದಾನ ಮುಗಿದ ನಂತರ ಮತ ಎಣಿಕೆ ಕಾರ್ಯ ನಡೆಯಲಿದೆ. ಜಿಲ್ಲಾ ಘಟಕದ ಅಧ್ಯಕ್ಷ ಒಂದು ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು , ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನಕ್ಕೆ ಇಬ್ಬರು ಹಾಗೂ ಒಂದು ಖಜಾಂಚಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ . ಜಿಲ್ಲಾ ಕಾರ್ಯಕಾರಣಿಯ 15 ಸ್ಥಾನಗಳಿಗೆ 28 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ .
ಈಗಾಗಲೇ ಮೂರು ಉಪಾಧ್ಯಕ್ಷರು ಹಾಗೂ ಮೂರು ಕಾರ್ಯದರ್ಶಿಗಳ ಹುದ್ದೆ ಹಾಗೂ ರಾಜ್ಯ ಕಾರ್ಯಕಾರಣಿಗೆ ಜಿಲ್ಲಾ ಪ್ರತಿನಿಧಿಯ ಒಂದು ಹುದ್ದೆಗೆ ಅವಿರೋಧ ಆಯ್ಕೆಯಾಗಿದೆ . ಜಿಲ್ಲಾ ಮಟ್ಟದ ಪದಾಧಿಕಾರಿಗಳ ಚುನಾವಣೆ ಜೊತೆಗೆ ರಾಜ್ಯದ ಕಾರ್ಯಕಾರಣಿ ಸಮಿತಿ ಉಪಾಧ್ಯಕ್ಷರ ಸ್ಥಾನಕ್ಕೆ ಸಹ ಮತದಾನ ಜರುಗಲಿದೆ. ಜಿಲ್ಲಾ ಪತ್ರಕರ್ತರ ಮತದಾರರ ಪಟ್ಟಿಯಲ್ಲಿ ಒಟ್ಟು 353 ಅರ್ಹ ಮತದಾರರು ಮತ ಚಲಾಯಿಸಲಿದ್ದಾರೆ . ಮತದಾರರು ಮತದಾನ ಸಂದರ್ಭದಲ್ಲಿ ತಮ್ಮ ಇತ್ತೀಚಿನ ಸದಸ್ಯತ್ವದ ಕಾರ್ಡ ಅಥವಾ ಭಾವಚಿತ್ರಯುಕ್ತ ಆಧಾರ ಅಥವಾ ಮತದಾರರ ಚೀಟಿಯನ್ನು ಹಾಜರಪಡಿಸಬೇಕಾಗುತ್ತದೆ.
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರವನ್ನು ನಿಷೇಧಿಸಲಾಗಿದೆ . ಮತದಾನ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ , ಕ್ಯಾಮರಾ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಕೆಯನ್ನು ನಿಷೇಧಿಸಲಾಗಿದ್ದು , ಮತದಾರರು ಮತಗಟ್ಟೆ ಪ್ರವೇಶುವಾಗ ಕೋವಿಡ್ ಮಾರ್ಗ ಸೂಚಿಯನ್ನು ಪಾಲಿಸಲು ಸೂಚಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪಿ.ಎಸ್.ಪರ್ವತಿ ದಿನವಾಣಿಗೆ ತಿಳಿಸಿದ್ದಾರೆ.