
ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಗ್ಯಾಂಗ್ ವಾರ್ ಶುರುವಾಗಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಎರಡು ಗ್ಯಾಂಗ್’ಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು ವಾಣಿಜ್ಯ ನಗರಿಯ ಜನತೆ ಭಯಭೀತರಾಗಿದ್ದಾರೆ.
ಹೌದು, ಇಲ್ಲಿನ ಮಂಟೂರ ರಸ್ತೆಯಲ್ಲಿ ಈ ಒಂದು ಗ್ಯಾಂಗ್ ವಾರ್ ನಡೆದಿದ್ದು, ಶ್ಯಾಮ್ ಜಾಧವ್ ಮತ್ತೆ ಎಮ್.ಡಿ.ದಾವೂದ್ ಬ್ರದರ್ಸ್ ನಡುವೆ ಈ ವಾರ್ ನಡೆದಿದೆ ಎಂದು ತಿಳಿದುಬಂದಿದೆ.
ಇಂದು ಗಂಗಾಧರನಗರದ ನಿವಾಸಿ ಶ್ಯಾಮ್ ಜಾಧವ್ ಮತ್ತು ಆತನ ಸಹಚರರು ಮಂಟೂರ ರಸ್ತೆಯ ಸ್ಮಶಾನಕ್ಕೆ ಶವಸಂಸ್ಕಾರಕ್ಕೆ ಹೋಗಿದ್ದರು ಈ ವೇಳೆ ಎಮ್.ಡಿ.ದಾವೂದ್ ಸಹೋದರ ಜಿಲಾನಿ ನದಾಫ್ ಎಂಬಾತ ರಸ್ತೆಯಲ್ಲಿ ನಿಂತಿದ್ದ, ಈ ವೇಳೆ ಆತ ಶ್ಯಾಮ್ ಜಾಧವ್ ಸಹಚರರನ್ನು ಗುರಾಯಿಸಿ ನೋಡಿದ್ದಾನೆ ಎನ್ನಲಾಗಿದೆ. ಇದೇ ಕಾರಣಕ್ಕೆ ಜಾಧವ್ ಸಹಚರರು ಪ್ರಶ್ನೆ ಮಾಡಿದಕ್ಕೆ ಮಾತಿಗೆ ಮಾತು ಬೆಳೆದು ಶ್ಯಾಮ ಜಾಧವ್ ಮತ್ತೆ ದಾವೂದ್ ಸಹಚರರ ನಡುವೆ ಗ್ಯಾಂಗ್ ವಾರ್ ನಡಿದಿದೆ ಎನ್ನಲಾಗಿದೆ.
ಈ ಘಟನೆಯಲ್ಲಿ ಎರಡು ಗುಂಪಿನವರು ಪರಸ್ಪರ ತಲ್ವಾರ್, ಬಾಟಲಿ, ಹಾಗೂ ಕಬ್ಬಿಣದ ರಾಡ್’ಗಳಿಂದ ಹೊಡೆದಾಡಿಕೊಂಡಿದ್ದಾರೆ. ಪರಿಣಾಮ ಹಲವರಿಗೆ ಗಾಯಗಳಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಗ್ಯಾಂಗ್ ವಾರ್ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶರಹ ಹಾಗೂ ಬೆಂಡಿಗೇರಿ ಪೋಲಿಸರು ದೌಡಾಯಿಸಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಮುಂದಾಗುತ್ತಿದ್ದ ಅನಾಹುತಗಳು ತಪ್ಪಿದಂತಾಗಿದೆ.
ಸದ್ಯ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಪರಿಸ್ಥಿತಿ ಪರಿಶೀಲನೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವವರ ಆರೋಗ್ಯ ವಿಚಾರಿಸಿ ಗ್ಯಾಂಗ್ ವಾರ್’ಗೆ ಕಾರಣ ಏನೆಂಬುದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಒಟ್ಟಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಏರ್ಪಟ್ಟ ಗ್ಯಾಂಗ್ ವಾರ್ ನಗರದ ಜನತೆಯನ್ನು ಬೆಚ್ಚಿಬಿಳಿಸಿದ್ದು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳತ್ತಾರೆ ಕಾದುನೋಡಬೇಕಿದೆ.




